ಬಾಲಬೊಮ್ಮಣ್ಣ 
ಹನ್ನೆರಡನೆಯ ಶತಮಾನದ ಒಬ್ಬ ವಚನಕಾರ. ಗಣಸಹಸ್ರನಾಮದಲ್ಲಿ ಈತನ ಹೆಸರು ಉಕ್ತವಾಗಿದೆ. ಶಾಂತಲಿಂಗ ದೇಶಿಕನ ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರರತ್ನಾಕರದಲ್ಲಿ ಈತನ ಬಗೆಗೆ ಕಂಡುಬರುವ ವಿವರಗಳು ಹೀಗಿವೆ. ಸೊನ್ನಲಾಪುರದಲ್ಲಿ ಸಿದ್ಧರಾಮೇಶ್ವರ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗುಡಿ ಕಟ್ಟಿ ಪೂಜೆ ಕೈಗೊಂಡ. ಆಗ ಒಂದು ಲಿಂಗ ಸ್ಥಾಪಿಸಿ ಪೂಜಿಸುವುದಕ್ಕೆ ತನ್ನಲ್ಲಿ ಧನವಿಲ್ಲವೆಂದು ಬೊಮ್ಮಣ್ಣ ಚಿಂತಿಸತೊಡಗಿದ. ಈ ವಿಷಯ ತಿಳಿದ ಸಿದ್ಧರಾಮಯ್ಯ ಬೊಮ್ಮಣ್ಣನನ್ನು ತಮ್ಮ ಮನೆಗೆ ಕರೆದು, ಅವನ ಕೈಯಲ್ಲಿ ಒಂದು ಹಾರೆ ಕೊಟ್ಟು ಅಂಗಳ ಅಗೆಯುವಂತೆ ಆಜ್ಞಾಪಿಸಿದ. ಅದರಂತೆ ಬೊಮ್ಮಣ್ಣ ಅಗೆದಾಗ ಒಂದು ಕೊಪ್ಪರಿಗೆ ಹೊನ್ನಿನ ರಾಶಿ ಕಂಡು ಬಂತು. ಅಷ್ಟು ಹೊನ್ನ ರಾಶಿಯನ್ನೂ ಬೊಮ್ಮಣ್ಣನಿಗೆ ಕೊಟ್ಟು ಗುಡಿಕಟ್ಟಿ ಲಿಂಗಪೂಜೆ ಮಾಡುವಂತೆ ಬೋಧಿಸಿದ. ಬೊಮ್ಮಣ್ಣ ತೃಪ್ತಿಯಿಂದ ಲಿಂಗಪೂಜೆ ಮಾಡಿ ಕೃತಾರ್ಥನಾದ.

ಸದ್ಯದಲ್ಲಿ ಈತನ ಹತ್ತು ವಚನಗಳು ಉಪಲಬ್ಧವಿವೆ. ವೀರ ಶೂರ ರಾಮೇಶ್ವರಲಿಂಗ, ಎಂಬುದು ಈತನ ವಚನಗಳ ಅಂಕಿತ. ಇವನ ವಚನಗಳು ಆರ್ಥಗರ್ಭಿತವಾಗಿಯೂ ಸುಲಲಿತವಾಗಿಯೂ ಇದ್ದು ವೀರಶೈವ ಧರ್ಮದ ನಿರೂಪಣೆಯನ್ನು ಸರಳವಾಗಿಯೂ ಸಮರ್ಥವಾಗಿಯೂ ಮಾಡಿವೆ. ಭಾವ ಅನುಭಾವಗಳ ಮಿಲನವನ್ನೂ ಇವನ ವಚನಗಳಲ್ಲಿ ಕಾಣಬಹುದಾಗಿದೆ. (ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ